Article on ಆರ್.ಎಸ್‌. ಕೇಶವಮೂರ್ತಿ

Post Reply
ajaysimha
Posts: 790
Joined: 19 Apr 2018, 18:16
x 6
x 4

#1 Article on ಆರ್.ಎಸ್‌. ಕೇಶವಮೂರ್ತಿ

Post by ajaysimha »

ಆರ್.ಎಸ್‌. ಕೇಶವಮೂರ್ತಿ

ಸಂಗೀತ ಪ್ರಪಂಚದಲ್ಲಿ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಮೊದಲಾದವರು ದೊಡ್ಡ ಸಾಧಕರು. ರುದ್ರಪಟ್ಟಣ ಸುಬ್ಬರಾಯ ಕೇಶವ ಮೂರ್ತಿಗಳು ಗಂಧರ್ವಾಂಶ ಸಂಭೂತರೆನ್ನಿಸಿದ್ದ, ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. ಗುರುಗಳನ್ನು ಶ್ವೇತಛತ್ರವೆಂದೇ ಭಾವಿಸಿದ್ದ ಕೇಶವಮೂರ್ತಿಗಳು “ಸಾಧನೆಯಿಂದ ಸಿದ್ಧಿ; ಸಿದ್ಧಿಯಿಂದ ಪ್ರಸಿದ್ಧಿ; ಅಸಾಧ್ಯ ಎನ್ನುವುದು ಸಲ್ಲ; ಪ್ರತಿಯೊಬ್ಬರೂ ಅಸಾಧ್ಯ ಸಾಧಕರಾದರೆ ‘ಅಸಾಧ್ಯಂ ತವ ಕಿಂವದ?” ಎಂದು ಪದೇ ಪದೇ ಹೇಳುತ್ತಿದ್ದರು.

ಮಾರ್ಚ್ 4, 1903ರಂದು ಬೇಲೂರಿನಲ್ಲಿ ರುದ್ರಪಟ್ಣ ಸುಬ್ಬರಾಯರು ಮತ್ತು ಪುಟ್ಟಕ್ಕಯ್ಯನವರಿಗೆ ಜನಿಸಿದ ಪುತ್ರನಿಗೆ ಬೇಲೂರು ಚನ್ನಕೇಶವನ ಹೆಸರನ್ನೇ ಇಟ್ಟು ಕೇಶವಮೂರ್ತಿ ಎಂದು ಕರೆದರು. ಇಪ್ಪತ್ನಾಲ್ಕು ತಲೆಮಾರುಗಳಿಂದ ವೈಣಿಕ ವಂಶಜರಾದ ಸುಬ್ಬರಾಯರು ಶಾಲೆಯಲ್ಲಿ ಸಂಗೀತ ಬೋಧಕರಾಗಿದ್ದರು. ಕೇಶವಮೂರ್ತಿ ಮೂರು ತಿಂಗಳ ಕೂಸಾಗಿದ್ದಾಗ ಅವರಿಗೆ ಚಿಕ್ಕಮಗಳೂರಿಗೆ ವರ್ಗವಾಯಿತು.

ಧ್ವನಿವರ್ಧಕ ಸಾಧನಗಳಿಲ್ಲದ ಕಾಲದಲ್ಲಿ ವೀಣೆಯ ನಾದವನ್ನು ಹೆಚ್ಚಿಸುವುದರ ಬಗ್ಗೆ ಸಂಶೋಧನೆ ನಡೆಸಿ, ಇಪ್ಪತ್ನಾಲ್ಕು ತಂತಿಗಳ ವೀಣೆಯನ್ನು ಪ್ರಥಮವಾಗಿ ರಚಿಸಿದ ಸಾಧಕರು ಕೇಶವಮೂರ್ತಿಗಳು. ಪಿಟೀಲು ಕೊಳಲು, ಜಲತರಂಗ್‌, ಪಿಯಾನೋ, ಬಾಲಕೋಕಿಲ ವಾದ್ಯಗಳನ್ನು ಸಹ ಅವರು ನುಡಿಸುತ್ತಿದ್ದರು.

ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ ಕೇಶವಯ್ಯನಿಗೆ ಯಾವಾಗಲೂ ಸಂಗೀತದ ಕಡೆಗೇ ಒಲವು ಹೆಚ್ಚು. ತಂದೆಯವರ ಬಳಿಯೇ ಬಾಲ ಪಾಠದಿಂದ ವೀಣೆ ಕಲಿಯುತ್ತಿದ್ದು, ಸ್ವರಜತಿ ನುಡಿಸುವವರೆಗೆ ಬಂದಿದ್ದರು. ಮನೆಬಿಟ್ಟು ನೂರಿಪ್ಪತ್ತು ಮೈಲಿ ನಡೆದುಕೊಂಡು ಮೈಸೂರಿಗೆ ಬಂದರೆ ದೊಡ್ಡಪ್ಪನವರು ನಿರಾಶೆ ಮೂಡಿಸಿದರು. ಅಲ್ಲಿಂದ ಹೊರಬಂದು ಅಲೆಯುತ್ತಿದ್ದಾಗ ಅವರ ಬಂಧು ರಾಯಪ್ಪನವರು ತಮ್ಮ ಮನೆಗೆ ಕರೆದುಕೊಂಡು ಹೋದರು. ರಾಯಪ್ಪನವರ ಎದುರು ಮನೆಯಲ್ಲಿದ್ದ ಅಕ್ಕಮ್ಮಣ್ಣಿ ಎಂಬಾಕೆಗೆ ವೀಣೆ ಕಲಿಸಲು ವೀಣೆ ಸುಬ್ಬಣ್ಣನವರು ಬರುತ್ತಿದ್ದರು. ಅವರ ಪ್ರೌಢಿಮೆ ಬಗ್ಗೆ ಕೇಳಿದ್ದ ಕೇಶವಯ್ಯ ಒಂದು ದಿನ ಅವರಿಗೆ ಅಡ್ಡಬಿದ್ದು ತಮ್ಮ ಮಹತ್ತಾದ ಅಭಿಲಾಷೆಯನ್ನು ನಿವೇದಿಸಿಕೊಂಡರು. ಭಕ್ಷಿ ಸುಬ್ಬಣ್ಣನವರು ಸಮಾಧಾನಚಿತ್ತದಿಂದ ಆಲೈಸಿ, ಮಾತೇ ಇಲ್ಲದೆ, ಮಂದಹಾಸದಿಂದ ಆರ್ಶೀವದಿಸಿದರು. ವೀಣೆ ಕಲಿಯುವ ತಮ್ಮ ಆದಮ್ಯ ಬಯಕೆಯನ್ನು ಅವರ ಮುಂದೆ ಹೇಳಿಕೊಂಡಾಗ ಉದಾರ ಮನಸ್ಸಿನಿಂದ “ನಮ್ಮ ಮನೆಯಲ್ಲೇ ಬಂದು ಅಭ್ಯಾಸ ಮಾಡು” ಎಂದು ಹೇಳಿದರು. ಅಂತೆಯೇ ಕೇಶವಯ್ಯ ಪ್ರತಿನಿತ್ಯ ಸುಬ್ಬಣ್ಣನವರ ಮನೆಗೆ ಹೋಗಿ, ಅವರ ಪತ್ನಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಟ್ಟು, ಅಲ್ಲಿದ್ದ ಗ್ರಂಥಭಂಡಾರದಿಂದ ರಚನೆಗಳನ್ನು ಆಯ್ದು ನುಡಿಸಿಕೊಳ್ಳುತ್ತಿದ್ದರು. ಹೀಗೆ ಹಲವಾರು ವರ್ಷಗಳು ಗುರುಸೇವೆ ಮತ್ತು ಸತತ ಸಾಧನೆ ಮಾಡಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡರು.

ಕೇಶವಯ್ಯನ ಯಮಸಾಧನೆ ಹಾಗೂ ಆತನ ಚಿತ್ರವಿಚಿತ್ರ ರೂಪದ ನಾದಾಲಂಕಾರ, ಸೊಗಸಾದ ದಿವ್ಯತಾನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದುವು. 1929ರಲ್ಲಿ ಬಿಡಾರಂ ಕೃಷ್ಣಪ್ಪನವರು ದೇಶಾಟನೆ ಮಾಡಿ ಬಂದ ಸಂಪಾದನೆಯಿಂದ ಮೈಸೂರಿನಲ್ಲಿ ರಾಮಮಂದಿರ ನಿರ್ಮಾಣ ಮಾಡಿದರು. ಅಲ್ಲಿ ನಡೆದ ಪ್ರಪ್ರಥಮ ಕಚೇರಿ ಕೇಶವಯ್ಯನದು. ಆ ಕಚೇರಿಗೆ ಅತ್ಯಂತ ಹಿರಿಯ ಕಲಾವಿದರಲ್ಲದೆ ಸಮಾಜ ಪೋಷಕರೂ ಆಗಮಿಸಿದ್ದರು. ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿಯುವಂತೆ ಕೇಶವಯ್ಯನವರು ರಸಿಕರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದರು. “ಇಂತಹ ದಿವ್ಯವಾದನವನ್ನು ಕೇಳಲು ಶೇಷಣ್ಣ ಬದುಕಿಲ್ಲವಲ್ಲ” ಎಂದು ಸುಬ್ಬಣ್ಣನವರು ಉದ್ಗರಿಸಿದರಂತೆ.

ಹೀಗೆ ಪ್ರಾರಂಭವಾದ ಕೇಶವಮೂರ್ತಿಗಳ ಸರಸ್ವತಿಯ ಆರಾಧನೆ, ಆರೋಹಣ ಕ್ರಮದಲ್ಲಿಯೇ ಮುಂದುವರೆಯಿತು. ಗುರುಗಳ ಸಂಪೂರ್ಣಾನುಗ್ರಹದ ದೆಸೆಯಿಂದ ಭಾರತಾದ್ಯಂತ ಹಲವಾರು ಪ್ರಮುಖ ರಾಜಮಹಾರಾಜರ ಸಮ್ಮುಖದಲ್ಲಿ ಕಚೇರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಗೌರವಿಸಲ್ಪಟ್ಟರು. 1927ರಲ್ಲಿ ವೆಂಕಟಲಕ್ಷಮ್ಮನವರ ಜೊತೆಗೆ ವಿವಾಹವಾಯಿತು. ಐವತ್ತು ವರ್ಷಗಳ ಸುದೀರ್ಘ ಸಹಬಾಳ್ವೆಯಲ್ಲಿ ಸುಖದುಃಖಗಳನ್ನು ಸಮನಾಗಿ ಹಂಚಿಕೊಂಡ ಇವರಿಗೆ ಹನ್ನೊಂದು ಪುತ್ರರತ್ನಗಳು. ರಾಮನಾಥಪುರದ ಮಹಾರಾಜರಿಗೆ ಕಾಣಿಕೆಯಾಗಿ ಕೊಡಲು ಮುತ್ತಯ್ಯಭಾಗವತರು ಒಂದು ದಂತದ ವೀಣೆಯನ್ನು ಮಾಡಿಸಿದ್ದರಂತೆ. 1930ರಲ್ಲಿ ಅವರಿಂದ ಅದನ್ನು ಏಳುನೂರ ಐವತ್ತು ರೂಪಾಯಿಗಳಿಗೆ (ಆ ಕಾಲಕ್ಕೆ ಅದು ದೊಡ್ಡ ಮೊತ್ತ) ಕೇಶವಯ್ಯನವರು ಕೊಂಡರು.

ಭಾರತದಾದ್ಯಂತ ಪ್ರವಾಸಮಾಡಿ ವೀಣಾನಾದದ ದುಂದುಭಿ ಮೊಳಗಿಸಿದರು. ವಿಶ್ವಕವಿ ರಬೀಂದ್ರನಾಥ ಠಾಕೂರರು ಕೇಶವಮೂರ್ತಿಗಳ ವೀಣಾವಾದನದ ಮೋಡಿಗೆ ಮಾರುಹೋಗಿ, ತಮ್ಮೊಡನೆ ವಿಶ್ವ ಪರ್ಯಟನ ಮಾಡಲು ಆಹ್ವಾನಿಸಿದರಂತೆ. ಮಡಿವಂತಿಕೆಯ ಕಾರಣದಿಂದ ಅವರು ಅದನ್ನು ಒಪ್ಪಲಿಲ್ಲ. 1957ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್‌ ಹನುಮಂತಯ್ಯನವರು ಮೂರ್ತಿಗಳನ್ನು ಯುನೆಸ್ಕೊ (UNESCO) ಗೆ ಕಳಿಸಲು ಮುಂದೆ ಬಂದಾಗಲೂ ಇವರ ಮಡಿವಂತಿಕೆ ಅಡ್ಡ ಬಂತು.

ಕೇಶವಮೂರ್ತಿಯವ ತಾನವೈಖರಿಯಲ್ಲಿ ಅಪ್ರತಿಮರು. ವೀಣೆಯಲ್ಲಿ ಆರೂವರೆ ಅಷ್ಟಕ (octave) ಗಳನ್ನು ನುಡಿಸುತ್ತಿದ್ದರು. ಹಿಂದುಸ್ತಾನಿ ಸಂಗೀತದಲ್ಲೂ ಆಸಕ್ತಿ ಹೊಂದಿದ್ದ ಪ್ರತಿಭಾವಂತ ಕಲಾವಿದರವರು. ಅಬ್ದುಲ್‌ ಕರೀಂಖಾನರ ಬಳಿ ಕೆಲಕಾಲ ಮಾರ್ಗದರ್ಶನ ಪಡೆದರು. ನಾಲ್ವಡಿ ಕೃಷ್ಣರಾಜ ಒಡೆಯರು ಇವರ ವೀಣಾ ವಾದನವನ್ನು ಕೇಳಿ ಆನಂಧಿಸಿ, 1935ರ ಜನವರಿಯಲ್ಲಿ ಇವರನ್ನು ಆಸ್ಥಾನ ವಿದ್ವಾಂಸರನ್ನಾಗಿ ಮಾಡಿದರು.

1940ರಲ್ಲಿ ಪಾಶ್ಚಾತ್ಯ ಸಂಗೀತ ಕಲಿಯುವ ಪ್ರಸ್ತಾಪ ಬಂದಾಗ, ಮೂರ್ತಿಗಳು ಸ್ವದೇಶದಲ್ಲಿದ್ದುಕೊಂಡೇ ಕಲಿತು, ಲಂಡನ್ನಿನ ಟ್ರಿನಿಟಿ ಕಾಲೇಜ್‌ ಅಫ್‌ ಮ್ಯೂಸಿಕ್‌ನಲ್ಲಿ ಅಧ್ಯಯನ ಮಾಡಿ ಉನ್ನತ ದರ್ಜೆಯಲ್ಲಿ (distinction) ತೇರ್ಗಡೆ ಹೊಂದಿದರು.

ಒಂದುಬಾರಿ ಭಾರತ ಕೋಗಿಲೆ ಸರೋಜಿನಿ ನಾಯ್ಡು ಅವರು ಮೂರ್ತಿಗಳನ್ನು ಮಹಾತ್ಮ ಗಾಂಧಿಯವರ ಮುಂದೆ ವೀಣೆ ನುಡಿಸಲು ಕೇಳಿದಾಗ, ಸಂತೋಷದಿಂದೊಪ್ಪಿಕೊಂಡರು. ಗಾಂಧೀಜಿ ಮಾರನೇ ದಿನ ರೌಂಡ್‌ ಟೇಬಲ್‌ ಕಾನ್‌ಫೆರನ್ಸ್‌ಗೆ ಲಂಡನ್ನಿಗೆ ತೆರಳ ಬೇಕಿತ್ತು. ಮುಂಬೈನ ಬಿರ್ಲಾ ಭವನದಲ್ಲಿ ಆಹ್ವಾನಿತ ಶ್ರೋತೃಗಳ ಮುಂದೆ ತುರ್ತಾಗಿ ಕಚೇರಿ ಏರ್ಪಾಡಾಯಿತು. ವೀಣಾನಾದ ತರಂಗಗಳು ಸಭಾಂಗಣವೆಲ್ಲ ಆವರಿಸಿದಾಗ, ಗಾಂಧೀಜಿಯವರ ಸಲಹೆಯಂತೆ ಮೀರಾಬೆನ್‌ ಅಲ್ಲಿಯ ದೀಪಗಳನ್ನೆಲ್ಲಾ ಆರಿಸಿದರು. ತನ್ಮಯರಾಗಿ ಬೇರೆ ಯಾವ ಚಿತ್ತ ಚಂಚಲತೆಯಿಲ್ಲದೇ ಸುನಾದಮಯ ಜಗತ್ತಿನಲ್ಲೇ ವಿಹರಿಸಲು, ಈ ಉಪಾಯ. ಇಂತಹ ಪ್ರೋತ್ಸಾಹದಿಂದ, ಸ್ಪೂರ್ತಿ ಬಂದು ಕೇಶವಮೂರ್ತಿಯವರು ಎಂದಿಗಿಂತ ಮಿಗಿಲಾಗಿ ನುಡಿಸಿದರು. ಗಾಂಧೀಜಿ ಹೇಳಿದರಂತೆ “ನಾನು ಬಡವ, ಬೆಳ್ಳಿ ಬಂಗಾರ ಕೊಡಲಾರೆ. ನನ್ನ ಸ್ವಂತ ಕೈಗಳಿಂದ ನೈಯ್ದಿರುವ ಈ ಖಾದಿ ಜಮಖಾನೆ(carpet) ಯನ್ನು, ನನ್ನ ಮೆಚ್ಚಿಕೆಯ ಕುರುಹಾಗಿ ಕೊಟ್ಟರೆ ತೆಗೆದುಕೊಳ್ಳುವಿರಾ?” ಎಂದಾಗ ಮೂರ್ತಿಗಳು ಸಂತೋಷದಿಂದ ಸ್ವೀಕರಿಸಿದರು.

ಜಯಚಾಮರಾಜೇಂದ್ರ ಒಡೆಯರು ಮೂರ್ತಿಗಳ ಬಹುಮುಖ ಪ್ರತಿಭೆಗೆ ಕುರುಹಾಗಿ ವೈಣಿಕ ಪ್ರವೀಣ ಬಿರುದನ್ನು 1967ರ ದಸರಾ ಮಹೋತ್ಸವದ ವಿಜಯ ದಶಮಿಯಂದು ಕೊಟ್ಟು, ಗಂಡಭೇರುಂಡ ಪದಕದಿಂದ ಅಲಂಕರಿಸಿದರು. 1971ರಲ್ಲಿ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರಾಗಿದ್ದ ಮೂರ್ತಿಗಳಿಗೆ ಗಾನಕಲಾಭೂಷಣ ಪ್ರಶಸ್ತಿ, ಸ್ವರ್ಣ ಪದಕಯುಕ್ತ ಗೌರವಗಳು ಸಂದವು. 1978ರಲ್ಲಿ ವಿಶಾಖ ಸಂಗೀತ ಅಕಾಡೆಮಿಯಿಂದ ಸಂಗೀತ ಕಲಾಸಾಗರ ಬಿರುದಾಂಕಿತರಾದರು.

ಕೇಶವಮೂರ್ತಿಗಳಿಗೆ ತಮ್ಮ ಗುರುಗಳಂತೆಯೇ ಶಿಷ್ಯರಲ್ಲಿ ಎಲ್ಲಿಲ್ಲದ ಪ್ರೇಮ. ಅಂತೆಯೇ, ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಶಿಷ್ಯರನ್ನು ಪ್ರೀತಿಸುತ್ತಿದ್ದರು. ಸಂಗೀತ ಶಾಸ್ತ್ರಜ್ಞಾನ ಪ್ರಚೋದಿನೀ ಗ್ರಂಥಕರ್ತರಾದ, ವೈಣಿಕ ವಿದ್ವಾನ್‌ ಎಚ್‌.ಎಸ್‌. ಕೃಷ್ಣಮೂರ್ತಿ ಇವರ ನೆಚ್ಚಿನ ಶಿಷ್ಯರು. ಅವರ ಹನ್ನೊಂದು ಗಂಡು ಮಕ್ಕಳಲ್ಲಿ ಎಲ್ಲರಿಗೂ ಸಂಗೀತದಲ್ಲಿ ಅಭಿರುಚಿ.
ಎಂದೂ ಅನಾರೋಗ್ಯವೆಂದು ಮಲಗಿಲ್ಲದಿದ್ದ ಈ ವೈಣಿಕ ದಿಗ್ಗಜರಾದ ಆರ್. ಎಸ್. ಕೇಶವಮೂರ್ತಿಯವರು, 1982ರ ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ಅಪಘಾತದಲ್ಲಿ ಅಸುನೀಗಿದರು. ವೀಣಾಲೋಕದಲ್ಲಿನ ಶ್ರೇಷ್ಠತೆಯ ಪರಂಪರೆಯನ್ನು ಬೆಳಗಿದ ಈ ಮಹಾನ್ ಚೇತನಕ್ಕೆ ನಮ್ಮ ನಮನ.

Post Reply