
ಸವಿಸವಿ ನೆನಪು ಸಾವಿರ ನೆನಪು (ಭಾಗ 1)
ಅಂದಿನ ನವರಾತ್ರಿಯ ಸಂಭ್ರಮ
ನಮ್ಮ ತಾಯಿ ಮೈಸೂರಿನವರು. ಮಹಾ ಸಂಪ್ರದಾಯಸ್ಥ ಕುಟುಂಬದವರು. ಹೇಳಿಕೇಳಿ ಅಯ್ಯಂಗಾರರ ಮನೆ. ಟೀಚರ್ ಆದ್ದರಿಂದ ಟೂರ್ ಪ್ರೋಗ್ರಾಂ ಹೆಚ್ಚು. ಯಾವ ಊರಿಗೆ ಭೇಟಿ ಕೊಟ್ಟರೂ ಅಲ್ಲಿನ ಸಂಸ್ಕೃತಿ ಬಿಂಬಿಸುವ ಬೊಂಬೆ ಶೇಖರಣೆ.
ಮನೆಯ ಎಲ್ಲಾ ಪೆಟ್ಟಿಗೆಗಳು ವಿಧ ವಿಧವಾದ ಬೊಂಬೆಗಳಿಂದ ತುಂಬಿ ಹೋಗಿತ್ತು. ನವರಾತ್ರಿಯ ಮೂರು ದಿನಕ್ಕೆ ಮುಂಚೆಯೇ ಅಟ್ಟದಿಂದ ಇಳಿಸಿದ ಪೆಟ್ಟಿಗೆಗಳು,ಅದರ ಒಳಗೆ ಅಡಗಿ ಕುಳಿತ ಗೊಂಬೆಗಳ ಹೊರತೆಗೆದು ಆರಿಸಿಕೊಂಡು, ಮನೆಯಲ್ಲಿ ಮೈದಾ ಗೋಂದು ತಯಾರಿಸಿ,ಆಯ್ದು ತಂದ ಕಲರ್ ಪೇಪರ್,ನಕ್ಕಿ ಹಾಕಿ ಸೀರೆ ಪಂಚೆ ಉಡಿಸುವ ಸಂಭ್ರಮ. ಸಿಂಗರಿಸಿಕೊಂಡ ಪಟ್ಟದ ಗೊಂಬೆಗಳ ಸಾಲು ಜಂಬದಿಂದ ಬೀಗುತ್ತಿದ್ದವು.ಅದಕ್ಕೆ ಹೊಂದುವ ಆಭರಣಗಳು, ಫಳಫಳಿಸುವ ಬೆಳ್ಳಿ ಸೊಡರುಗಳು, ಮಧ್ಯದಲ್ಲಿ ವೀರಾಜಮಾನವಾಗಿ ಕುಳಿತ ಮಾವಿನೆಲೆಯ ಕಳಶ, ಅಕ್ಕಪಕ್ಕದ ಮನೆಯವರಿಂದ ಎರವಲು ತಂದ ಟಿನ್ ಡಬ್ಬ,ಮರದ ಹಲಗೆಗಳ ಬಳಸಿ ಮೆಟ್ಟಿಲುಗಳ ನಿರ್ಮಾಣ.ಅದರ ಮೇಲೆ ಶುಭ್ರ ಪಂಚೆಯ ಹಾಸು.ನಂತರ ಬೊಂಬೆ ಅಂದವಾಗಿ ಜೋಡಿಸುವ ಕೆಲಸ.
ಪಟ್ಟದ ಗೊಂಬೆಗಳ ಸಾಲು ಮೊದಲಾದರೆ, ನಂತರ ರಾಮ, ಕೃಷ್ಣರ ಸೆಟ್ಟು, ಲಕ್ಷ್ಮೀ ಸರಸ್ವತಿ ಗಣಪತಿ, ದಶಾವತಾರದ ಸೆಟ್ಟು, ಅಂದವಾಗಿ ತಲೆ ಆಡಿಸುವ ತಂಜಾವೂರು ಬೊಂಬೆಗಳು,ದಿನಸಿ ಸಾಮಾನು ಮಾರುವ ಶೆಟ್ಟಿ ದಂಪತಿಗಳು, ಪೋಲೀಸ್ ಸೆಟ್ಟು, ಅಡುಗೆ ಪರಿಕರಗಳು, ಪಿಂಗಾಣಿಯ ಬೊಂಬೆಗಳು,ರಾಗೀಕಾಳಿನ ಪಾರ್ಕು...ಅದರಲ್ಲಿ ವಾಹನಗಳು...ಪ್ರಾಣಿ ಪಕ್ಷಿಗಳು..ಪಕ್ಕದ ಮನೆಯ ಹುಡುಗಿಯರೂ ನಮ್ಮ ಜೊತೆ ಕೈ ಜೋಡಿಸುತ್ತಿದ್ದರು.ಅಬ್ಬಾ! ಒಂದೇ ಎರಡೇ, ನೆನೆಸಿಕೊಂಡರೆ ನಾವು ಇಷ್ಟೆಲ್ಲಾ ಮಾಡುತ್ತಾ ಇದ್ವಾ ಎಂದು ಆಶ್ಚರ್ಯ...
ನವರಾತ್ರಿಯ ಹತ್ತು ದಿನಗಳೂ ಸಂಭ್ರಮಕ್ಕೇನೂ ಕಡಿಮೆ ಇಲ್ಲ.. ಮನೆಯಲ್ಲಿ ಒಬ್ಬಟ್ಟಿನ ಘಮಲು.ಹಣ್ಣುಹೂಗಳ ಅಮಲು.
ದಿನಾ ಸಂಜೆಯಾದರೆ ಎಣ್ಣೆ ತಿಂಡಿಯ ಚರಪು,ಬೊಂಬೆ ಬಾಗಿನ ತಯಾರಿ..
ಮನೆಯಲ್ಲಿ ಕೂಡಿಸಿದ ಗೊಂಬೆಗಳ ನೋಡಲು ನಮ್ಮ ಗೆಳತಿಯರು,ಶಿಕ್ಷಕರು, ನೆರೆಹೊರೆಯವರು, ನೆಂಟರು,ಬಂಧುಬಳಗ ಎಲ್ಲರಿಗೂ ಆಹ್ವಾನ.. ಅವರೆಲ್ಲ ಬಂದು ನೋಡಿ ಮೆಚ್ಚಿ ಕೊಂಡಾಡಿದರೆ ಅಷ್ಟು ಕಷ್ಟ ಪಟ್ಟು ಗೊಂಬೆ ಇಟ್ಟಿದ್ದಕ್ಕೂ ಏನೋ ಸಾರ್ಥಕ್ಯ ಭಾವ..
ನಾವು ವಠಾರದ ಹೆಣ್ಣು ಮಕ್ಕಳು ಶುಭ್ರವಾಗಿ ಎರೆದು ಕೊಂಡು, ಸುಂದರವಾಗಿ ಅಲಂಕರಿಸಿಕೊಂಡು ಇಡೀ ಲ್ಯೊಕಾಲಿಟಿಯಲ್ಲಿ ಯಾರ ಯಾರ ಮನೆಯಲ್ಲಿ ಬೊಂಬೆ ಕೂಡಿಸಿದ್ದಾರೆ ಎಂದು ಸರ್ವೆ ಮಾಡಿ..ಒಂದು ಪ್ಲಾಸ್ಟಿಕ್ ಚೀಲ ಕಂಕುಳಲ್ಲಿ ಇರುಕಿಕೊಂಡು " ರೀ ಗೊಂಬೆ ಕೂಡ್ಸಿದೀರಾ" ಎಂದು ರಾಗವಾಗಿ ಉಲಿಯುತ್ತಿದ್ದೆವು.ಒಳಗೆ ಕರೆದ ಅವರು ತಿಂಡಿ ಕೊಟ್ಟು ಕಳಿಸದೆ ನಮ್ಮನೆ ಗೊಂಬೆಗೆ ಹಾಡೇಳಿ ಅಂದ ತಕ್ಷಣ ಜೊತೆಯಲ್ಲಿದ್ದ ಸುಬ್ಬಿ,ಪಾರೂ,ಲಚ್ಚಿಗಳ ಸಮೂಹ ಕೀರಲು ಧ್ವನಿಯಲ್ಲಿ ವರವೀಣಾ ಹಾಡಿದ್ದೇ ಹಾಡಿದ್ದು. ನಾವು ಒಂದಿಷ್ಟು ಸಂಗೀತ ಕಲಿತವರಿಗೆ ಆಕಾಲದಲ್ಲಿ ಡಿಮ್ಯಾಂಡೋ ಡಿಮ್ಯಾಂಡ್ ದೇವಿ ಸ್ತುತಿ, ಕೀರ್ತನೆಗಳು,ದೇವರನಾಮಗಳು ಓತಪ್ರೋತವಾಗಿ ಕಂಠದಿಂದ ಹೊರಹೊಮ್ಮುತ್ತಿದ್ದ ಕಾಲ.
ನಂತರ ಚೀಲದ ತುಂಬಾ ತುಂಬಿ ತಂದ ಬಗೆ ಬಗೆಯ ಎಣ್ಣೆ ತಿಂಡಿ ಚಕ್ಕುಲಿ, ಕೋಡುಬಳೆ,ಮುಚ್ಚೋರೆ,ತೇಂಗೋಳು,ಶಂಕರಪೋಳಿ, ಕೊಬ್ಬರಿ ಮಿಠಾಯಿ, ಮೈಸೂರು ಪಾಕು, ಪುರಿ ಉಂಡೆ ಮುಂತಾದ ಸಿಹಿ ತಿಂಡಿಗಳ ಜೊತೆಗೆ,ದೊನ್ನೆಯಲ್ಲಿನ ಉಸ್ಲಿ ಯಿಂದ ಹರಿದ ಎಣ್ಣೆ,ಕೋಸಂಬರಿಯಿಂದ ಸುರಿದ ನೀರು, ಪಿಚ ಪಿಚ ಎನ್ನುವ ಹಣ್ಣುಗಳು ಆಹಾ! ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ, ಜೊತೆಗೆ ಎಲ್ಲರ ಮನೆಯಲ್ಲೂ ಕನ್ಯಾಮುತೈದೆ ಎಂದು ಕೊಟ್ಟ ಬಣ್ಣ ಬಣ್ಣದ ಕೆಂಪು ಕುಂಕುಮವ ಢಾಳಾಗಿ ಬಳಿದುಕೊಂಡ ಹಣೆ...
ಕಾಲ್ಗೆಜ್ಜೆ ಸಪ್ಪಳ,ಬಳೆಗಳ ಕಿಣಿ ಕಿಣಿ, ಹೊಸ ಲಂಗದ ಸರಪರ ....
ಹೀಗೆ ಗವೀಪುರದಿಂದ ಹೊರಟ ನಮ್ಮ ವಾನರ ಸೈನ್ಯ ಮೇಲೆ ಬಸವನಗುಡಿ,ಬಲಕ್ಕೆ ಹನುಮಂತ ನಗರ, ಎಡಕ್ಕೆ ಗುಟ್ಟಳ್ಳೀ ಎಲ್ಲಾ ಏರಿಯಾಗಳನ್ನು ತಿರುಗಿ ಬರುತ್ತಿದ್ವೀ.
ಅದೇನು ಖುಷಿ,ಅದೇನು ಸಂಭ್ರಮ,ಅದೇನು ಸೊಗಸಿತ್ತು ಈ ಆಚರಣೆಗಳಲ್ಲಿ..
ಇಂದೇಕೋ ಹಂಚಿತಿಂದ ಆ ಸುಖದ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸು
PC: Artist Gopulu Paintings